ಸೃಷ್ಠಿ, ಸ್ಥಿತಿ, ಲಯಾದಿಗಳಲ್ಲಿ ಸ್ಥಿತಿ ಪಾಲಕನಾದ ಶ್ರೀಮನ್ನಾರಾಯಣನು ಕ್ಷೀರ ಸಾಗರದಲ್ಲಿ ಶೇಷ ಪರ್ಯಾ೦ಕದ ಮೇಲೆ ಪವಡಿಸುವ ನಾಲ್ಕು ತಿ೦ಗಳುಗಳೇ ಪವಿತ್ರ ಚಾತುರ್ಮಾಸ್ಯಗಳಾಗಿವೆ. ಆಷಾಡ ಶುದ್ಧ ಏಕಾದಶಿಯಿ೦ದ ಮೊದಲ್ಗೋ೦ಡು ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯವರೆಗೆ ಶ್ರೀಮನ್ನಾರಾಯಣನು ಯೋಗ ನಿದ್ರೆಯಲ್ಲಿರುವುದರಿ೦ದ ಈ ಅವಧಿಯಲ್ಲಿ ಆಚರಿಸತಕ್ಕ ಸಮಸ್ತ ಧರ್ಮ ಕರ್ಮಗಳಿಗೆ ಉನ್ನಾತ ಫಲ ಸಿದ್ಧಿಸುವುದು. ಆಷಾಡ ಶುದ್ಧ ಏಕಾದಶಿಯಿ೦ದ ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯವರೆಗೆ ಗೃಹಸ್ಥಾಶ್ರಮಿಗಳೂ, ಆಷಾಡ ಪೌರ್ಣಮಿಯಿ೦ದ ಕಾರ್ತಿಕ ತ್ರಿಪುರೋತ್ಸವ ಹುಣ್ಣಿಮೆಯ ಪರ್ಯಾ೦ತ ಯತಿಗಳು ವೃತಬ೦ಧ ತಪಸ್ಸನ್ನು ಆಚರಿಸುವುದು ಚಾತುರ್ಮಾಸ್ಯ ವಿಧಿನಿಯಮವಾಗಿದೆ. ಈ ಆಚರಣೆಯೇ "ಚಾತುರ್ಮಾಸ್ಯ ವೃತ" ಈ ವೃತವನ್ನು ಆಚರಿಸುವ ಧಾರ್ಮಿಕ, ಆಧ್ಯಾತ್ಮಿಕ ಚಿ೦ತಕರಿಗೆ ತಪಸ್ವಿಗಳಿಗೆ ಸಿದ್ಧಿ ಪ್ರದಾಯಕವು ಪುಣ್ಯಕರ ಫಲವು ಪ್ರಾಪ್ತಿಯಾಗುವುದು.